ಗುರುದೇವತಾ ಭಜನಮಂಜರೀ

ನಾನೇ ನಾನಲ್ಲದಿನ್ನೇನೊಂದು (ತತ್ತ್ವಪದ)

ಕೀರ್ತನಮ್ — 6

ನಾನೇ ನಾನಲ್ಲದಿನ್ನೇನೊಂದು ತೋರದು |
ನಾನೆಂಬ ನಿಜವನು ಧ್ಯಾನಿಸಿ ನೋಡೇ |
ಮಾನಮೇಯಗಳೆಂಬಿ |
ಕಾಣುವೀ ತ್ರಿಪುಟಿಯ |
ಭಾನ ತೋರದ ಸಚ್ಚಿದಾನಂದ ನಿಧಿಯೊಳು ||

ನಿರವಧಿಕನು ನಾನೇ |
ನಿರತಿಶಯನು ನಾನೇ |
ವಿರಚಿಸಿ ಮಾಯೆಯ |
ಬೆರೆತವ ನಾನೇ |
ಪರಿ ಪರಿರೂಪವ |
ಧರಿಸಿದವನು ನಾನೇ |
ಪರಮನೆನಿಸಿ ಜಗವ |
ಪೊರೆಯುವವನು ನಾನೇ ||

ಮಲಿನ ಸತ್ತ್ವವು ನಾನೇ |
ಕಲೆತದರೊಳು ನಾನೇ |
ಮಲಿನ ಜೀವನು ಎಂದು |
ತಿಳಿದವ ನಾನೇ |
ತಿಳಿಯದೆ ತತ್ತ್ವವ |
ಕಳವಳಿಸುವ ನಾನೇ |
ಬಳಸಿ ಜನ್ಮಗಳನೂ |
ಬಳಲಿದವನು ನಾನೇ ||

ದೇಹರೂಪನು ನಾನೇ |
ದೇಹಿಯಾದವ ನಾನೇ |
ಸೋಹಮೆಂದರಿಯದ |
ಮೋಹಿಯು ನಾನೇ |
ಸಾಹಸವನು ತಳೆ |
ದೂಹಿಸಿ ತತ್ತ್ವವ |
ಸೋಹಮೆಂದರಿತು |
ನಿರ್ಮೋಹಿಯಾದವ ನಾನೇ ||

ನನಸಿನೊಳಗು ನಾನೇ |
ಕನಸಿನೊಳಗೂ ನಾನೇ |
ತನಿನಿದ್ರೆಯೊಳು ನಾನೇ |
ಕೊನೆಯೊಳು ನಾನೇ |
ಮನೆಧನೋದ್ಯಾನ |
ವಾಹನವಸ್ತ್ರಭೂವಾರಿ |
ಕನಕಾದಿ ರೂಪಿನಿಂ |
ಜನಿಸಿದವನು ನಾನೇ ||

ಅರುಹು ರೂಪನು ನಾನೇ |
ಮರವೆಯಾದವ ನಾನೇ |
ಅರುಹು ಮರವೆಗಳೊಳಿರುವ
ರೂಪನು ನಾನೇ|
ಗುರು ಶಂಕರಾರ್ಯನೋಳು
ಬೆರದೇಕಮಯನಾಗಿ |
ಪರಿಪೂರ್ಣ ಭಾವದಿಂದಿರುವ
ರೂಪನು ನಾನೇ ||