ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ |
ಯೋಗಕ್ಷೇಮಧುರಂಧರಸ್ಯ ಸಕಲಶ್ರೇಯಃಪ್ರದೋದ್ಯೋಗಿನೋ
ದೃಷ್ಟಾದೃಷ್ಟಮತೋಪದೇಶಕೃತಿನೋ
ಬಾಹ್ಯಾಂತರವ್ಯಾಪಿನಃ |
ಸರ್ವಜ್ಞಸ್ಯ ದಯಾಕರಸ್ಯ ಭವತಃ
ಕಿಂ ವೇದಿತವ್ಯಂ ಮಯಾ
ಶಂಭೋ ತ್ವಂ ಪರಮಾಂತರಂಗ ಇತಿ ಮೇ
ಚಿತ್ತೇ ಸ್ಮರಾಮ್ಯನ್ವಹಮ್ ||
ರಾಗಃ : ಅಹಿರಭೈರವ
ತಾಲಃ : ಆದಿ ತಿಸ್ರ ಗತಿ
ಶಿವರಾತ್ರಿ ಸಾಂಗವಾಯಿತು
ಅಲ್ಲಿರುವ ಶಿವನೊಡನೆ ಸಂಗವಾಯಿತು
ಹವನ ಬಹಿರಂಗವಾಯಿತು
ಬಾಧಿಸುವ ಶವದೇಹ ಭಂಗವಾಹಿತು ||
ಉಪವಾಸಿಯಾಗಿ ನಾನು ಬಿಡಿಸಿ
ತಂದುಪಚಾರ ಬಿಲ್ವಗಳನು
ಗುಪಿತ ಶಿವ ಮಂದಿರವನು ಸೇರಿ
ಮಂಟಪದ ಬಾಗಿಲ ತೆರೆದೆನು ||
ಸಂಗಿಸದೇ ಖಂಡದಲ್ಲಿ ಕೂಡಿ
ಬಹಿರಂಗ ಬ್ರಹ್ಮಾಂಡದಲ್ಲಿ
ಮಂಗಳಾಕಾರದಲ್ಲಿ ಬೆಳಗುತಿಹ
ಲಿಂಗವನು ಕಂಡೆನಲ್ಲಿ ||
ಪಾತಾಳ ಭುವನಗಳನು
ಗಗನಾಂಡ ಬೇತಾಳ ಭೂತಗಳನು
ಭೂತಾದಿ ಕಾಲಗಳನು ಬಳಸಿಚಿದ್ಜ್ಯೋತಿ ರೂಪಾಯ್ತು ತಾನು ||
ಅಭಯವೇ ತೋರುತಿಹುದು
ಎಲ್ಲೆಲ್ಲೂ ಶುಭಮಹೋದಯವಾದುದು
ಸಭಯ ಸಂಸರ್ಗವಿರದು
ಅಮೃತದಿಂದಭಿಷೇಕವಾಗುತಿಹುದು ||
ಘಂಟೆಯನು ಬಡಿಯಲಿಲ್ಲ
ಅದು ಬಹಳ ಕಂಟಕವೇ ತೋರಿತಲ್ಲ
ಕುಂಟರೀ ನಂಟರಿಲ್ಲ ದೀಪಗಳನಂಟಿಸುವನಾವನಿಲ್ಲ ||
ಗಾತ್ರವೇ ಕಾಣಲಿಲ್ಲ
ಅದರಿಂದ ಪಾತ್ರೆಗಳನ್ನಿರಿಸಲಿಲ್ಲ
ಪತ್ರೆಗವಕಾಶವಿಲ್ಲ ಶಿವನ
ಬಳಿ ರಾತ್ರಿಯೇ ತೋರಲಿಲ್ಲ ||
ಭೇದವಲ್ಲಿಲ್ಲವಾಯಿತು
ಮಂತ್ರಪಠನಾದಿಗಳು ಬೇಡವಾಯಿತು
ಪಾದವೇ ಭುವನವಾಯಿತು
ಅದರಿಂದ ಪಾದ್ಯವೇ ಶೂನ್ಯವಾಯಿತು ||
ಪಂಚಪಾತ್ರೆಗಳ ತೊರೆದೆ
ಆಗಾಮಿ ಸಂಚಿತಂಗಳನು ಕಳೆದೆ
ಪಂಚಾಮೃತವನು ಸವಿದೆ
ಹರಿಹರವಿರಿಂಚಿರೂಪವನು ತಳೆದೆ ||
ಮರಣಜನ್ಮಂಗಳಿಲ್ಲ ಮುಂದದರ
ಭರಣ ದುಃಖಂಗಳಿಲ್ಲ
ಬರುವ ತಾಪಂಗಳಿಲ್ಲ ಇದನು
ಸದ್ಗುರು ಶಂಕರಾರ್ಯ ಬಲ್ಲ ||
ಶಂಕರ ಸದಾಶಿವ ಸಭಾಪತೇ ಮನೋಹರ
ಚಂದ್ರಶೇಖರ ಜಟಾಧರ ಉಮಾಮಹೇಶ್ವರ
ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ |