ಗುರುದೇವತಾ ಭಜನಮಂಜರೀ

ಹರಿಯಾರು ಹರನಾರು ಭೇದವವರೊಳಗಿಹುದೆ

ಘೋಷಃ

ಹರಿಹರಾತ್ಮಕ ಚೈತನ್ಯ ಕೀ ಜೈ

ಶ್ಲೋಕಃ

ಮಾಧವೋಮಾಧವಾವೀಶೌ
ಸರ್ವಸಿದ್ಧಿವಿಧಾಯಿನೌ |
ವಂದೇ ಪರಸ್ಪರಾತ್ಮಾನೌ
ಪರಸ್ಪರನುತಿಪ್ರಿಯೌ ||

ಕೀರ್ತನಮ್ — 1

ರಾಗಃ : ಆಭೇರಿ

ತಾಲಃ : ಖಂಟ ಚಾಪು

ಹರಿಯಾರು ಹರನಾರು
ಭೇದವವರೊಳಗಿಹುದೆ |
ಹರಿದೊಡನೆ ಮನದರಿವು
ಹರಿಹರರು ಬೇರಹರೆ ||

ಜಗಕೆಲ್ಲ ದೊರೆರಾಯ
ಗೌರಿಯೊಡೆಯನು ಅಹುದು
ಜಗದಂತರಾತುಮನು
ಸಿರಿಪತಿ ಜನಾರ್ದನನು |
ಬಗೆವೊಡೆನಗಿವರೊಳಗೆ
ಭೇದವಿರದಾದೊಡೆಯು
ಭಗುತಿ ಮಿಗಿಲಾಗಿಹುದು
ಕಿರಿಚಂದ್ರಶಿಖರನೊಳು ||

ಹೃದಯದೊಳೆ ಹರನಿರ್ಪ
ಹೃದಯದೊಳೆ ಹರಿವಾಸ
ಸದಯರೀರ್ವರು ಇಂತು
ಒಂದೆಡೆಗೆ ನೆಲೆಸಿಹರು |
ಹೃದಯದಧಿದೇವ ಹರ
ಹೃತ್ಕಮಲವಾಸ ಹರಿ
ಮುದದಿ ಹೃದಯವು ಅರಳೆ
ಈರ್ವರುಂ ಕಂಡಪರು ||

ನಾಲ್ಭುಜನು ಹರನೆಂದು
ನಾಲ್ಭುಜನು ಹರಿಯೆಂದು
ನಾಲ್ಕುಮನ ಬುದ್ಧ್ಯಹಂಕಾರ­ಚಿತ್ತಗಳೆಂದು |
ಸಾರುವವು ವೇದಗಳು
ಸಾರುವರು ಯೋಗಿಗಳು
ಬೇರಕ್ಕೆ ನಾಲ್ಕನೂ
ಮೀರೆ ಕಂಡಪರಿವರು ||

ಜನುಮ ಜೀವನ ಮರಣ­ಕಿವರೆ ಕಾರಣರೆಂದು
ಅನುಪಮಾಕಾರಬಲ­ರೂಪಗಳು ಇವರ್ಗೆಂದು |
ಮುನಿಗಳೊರೆವರು ಸಕಲ
ಶ್ರುತಿಪುರಾಣಾದಿಗಳು
ಮನಕೆ ಸಮಬಲರಿಂತು
ಈರ್ವರೊಡೆಯರು ಅಕ್ಕೆ ||

ಆವ ರೂಪವ ಬಯಸಿ
ಮಾನವನು ಭಜಿಸುವನೊ
ದೇವನುಂ ರೂಪವನೆ
ಕೊಂಬನೆಂದಪರು |
ಭಾವನೆಯೆ ಪೆರ್ಚಿನದು
ಭಾವಿಸಲು ದೇವನನು
ಆವ ಭೇದವು ಅಕ್ಕು
ಹರನೆನಲು ಹರಿಯೆನಲು ||

ನಾಮಾವಲಿಃ

ಹರಿ ಬೋಲ ಹರಿ ಬೋಲ
ಹರಿಹರ ಬೋಲ
ಮುಕುಂದ ಮಾಧವ
ಗೋವಿಂದ ಬೋಲ
ಹರ ಬೋಲ ಹರ ಬೋಲ
ಹರಿಹರ ಬೋಲ
ಸಾಂಬಸದಾಶಿವ
ಶಂಕರ ಬೋಲ
ಮಾಧವ ಬೋಲ
ಉಮಾಧವ ಬೋಲ

ಘೋಷಃ

ಹರಿಹರಾತ್ಮಕ ಚೈತನ್ಯ ಕೀ ಜೈ