ನೀನಾರೋ ನೋಡು ನೋಡೆಲೋ
ಜೀವ ನೀನಾಗ ದೇವ |
ನೀನಿರದಿರೆ ಹೆಣವೆನಿಸುತ ಭಿನ್ನಿಸಿ |
ಕಾಣುವ ಈ ಮಲಕಾಯವ ಕಳೆದು ||
ಮಲ ಮಾಂಸಾಸ್ಥಿಗಳೊಂದೆಡೆಯೊಳು ಮೂಡಿ |
ಆಕಾರವಿಲ್ಲದ ಕುಲಜಾತಿವ್ರತ
ಸೂತಕದಿಂ ಕೂಡಿ |
ಒಳಹೊರಗೆಲ್ಲಿಯು ಮಲಮಯವೆನಿಸುತ |
ಚಲಿಸುವ ತನುಧರ್ಮವ ನೀಗಾಡೀ ||
ಹೆಣ್ಣುಗಂಡುಗಳೆಂಬುವ ಭಾವಗಳು |
ನಾನಾ ವಿಚಿತ್ರದ ಬಣ್ಣಾಕಾರದಿ
ಕೂಡಿದ ಕವಲುಗಳು |
ಬಣ್ಣಿಸಿಕೊಂಬುವ ಬಗೆಬಗೆ ಕಲೆಗಳು |
ಮಣ್ಣಾಗುವುದಿವು ನೀನಿರದಿರಲು ||
ಇದರೋಳ್ ನಿಲ್ಲುವ ನಿಜಕಳೆಯೊಂದಿಲ್ಲ |
ಮತ್ತೀ ಶರೀರವು ಮೊದಲಿಲ್ಲ
ಮಣ್ಣೆನಿಸಿದ ಮೇಲಿಲ್ಲ |
ಮೊದಲಿರದೆ ನೀನಿದು ಬರಲಿಲ್ಲ |
ಒದಗಿತು ಮರವೆಯೊಳಿದು ನೀನಲ್ಲ ||
ಹೃದಯಾಕಾಶದ ಮಧ್ಯದಿ ಗುರಿಯಿಟ್ಟು |
ಪರಿಪೂರ್ಣನಾಗುತ
ಇದಮಾಕಾರದ ಭೇದವ ನೀಬಿಟ್ಟು |
ವಿಧವಿಧ ರೂಪವ ಧರಿಸುವ ಚಿತ್ತವ |
ಸದಮಲ ಗುರು ಶಂಕರನೊಳಗಿಟ್ಟು ||