ದೀಪಪ್ರಜ್ವಲನೆ, ಗುರುವಂದನೆಯನ್ನು ಪೂರೈಸಿಕೊಂಡು, ಪ್ರತಿಯೊಂದು ದೇವತೆಯನ್ನು ಭಕ್ತಿಯಿಂದ ಸ್ಮರಿಸಿ ಕೀರ್ತನೆಯನ್ನು ಅಂಗ ಸಹಿತವಾಗಿ ಹಾಡುವುದು. ಕೆಳಗೆ ಭಜನಾ ಕ್ರಮದಲ್ಲಿ ಕೊಡಲ್ಪಟ್ಟ ಗಣೇಶರಿಂದ ಆಂಜನೇಯರ ವರೆಗೆ ಪ್ರತಿ ದೇವರ ಕೀರ್ತನೆಗಳನ್ನು ಹಾಡುವುದರಲ್ಲಿ ಈ ಅಂಗಗಳೆಲ್ಲವನ್ನು ಇದೇ ಕ್ರಮದಲ್ಲಿ ಬಿಡದೆ ಪಾಲಿಸುವುದು. ಪ್ರತಿ ದೇವರ ಕೀರ್ತನೆಯ ಅಂಗಗಳು ಇವು - (1) ಜಯ ಘೋಷ ವಾಕ್ಯ (2) ಶ್ಲೋಕ (3) ಪ್ರಸ್ತುತ ಕೀರ್ತನೆ (ಕೀರ್ತನೆಯ ಬದಲು ಸ್ತೋತ್ರವಿದ್ದಲ್ಲಿ ಮೊದಲು ಮತ್ತು ಕೊನೆಯಲ್ಲಿ ಘೋಷವಾಕ್ಯ ಮಾತ್ರವಿರುತ್ತದೆ. ಶ್ಲೋಕ ಮತ್ತು ನಾಮಾವಳಿಗಳು ಇರುವುದಿಲ್ಲ.) (4) ನಾಮಾವಳಿ (5) ಜಯ ಘೋಷ ವಾಕ್ಯ. ಇವುಗಳನ್ನು ಹಾಡಿದ ನಂತರ ಜಗದ್ಗುರು ಶ್ರೀ ಶಂಕರಭಗವತ್ಪಾದರ ಅಷ್ಟೋತ್ತರ ಅರ್ಚನೆ, ಹಣ್ಣು-ಕಾಯಿ ನೈವೇದ್ಯ ಮಾಡಿ ಆರತಿ ಹಾಡುಗಳನ್ನು ಹಾಡುತ್ತಾ ಆರತಿ ಮಾಡುವುದು. ನಂತರ ತತ್ತ್ವಪದಗಳನ್ನು (ಮೃದಂಗ ತಾಳ ಮೊದಲಾದ ವಾದ್ಯಗಳಿಲ್ಲದೆ) ಹಾಡಿ ಕೊನೆಯಲ್ಲಿ ಮಂಗಳ ಶ್ಲೋಕಗಳನ್ನು ಹೇಳಿ “ಶಾರದೇ ಪಾಹಿ ಮಾಂ ಶಂಕರ ರಕ್ಷ ಮಾಂ” ಎಂಬ ಪ್ರಾರ್ಥನೆಯೊಂದಿಗೆ ಭಜನೆಯನ್ನು ಮುಕ್ತಾಯಗೊಳಿಸುವುದು.