ಗುರುದೇವತಾ ಭಜನಮಂಜರೀ

ಜಗದ್ಗುರೋ ಜಯ ಜಗದ್ಗುರೋ ಶಂಕರ

ಜಗದ್ಗುರೋ ಜಯ ಜಗದ್ಗುರೋ
ಶಂಕರ ದೇಶಿಕ ಜಗದ್ಗುರೋ |
ನಿನ್ನಯ ಚರಿತೆಯ ಪಾಡುವೆ ನಾನು
ಪಾಲಿಸು ನನ್ನನು ಜಗದ್ಗುರೋ ||

ಲೋಕದಿ ಅವೈದಿಕ ಮತಗಳ ಖಂಡಿಸಿ
ಧರ್ಮವ ಸ್ಥಾಪಿಸಬೇಕೆಂಬ |
ದೇವದೇವರ ಪ್ರಾರ್ಥನೆಗೊಪ್ಪಿದೆ
ದಕ್ಷಿಣಾಮೂರ್ತಿಯೆ ಜಗದ್ಗುರೋ ||1||
ಪರಮ ನೀನಾದರೂ ಮಾನವನಂತೆ
ಧರ್ಮದ ರಕ್ಷಣೆ ಮಾಡಲು |
ತ್ಯಜಿಸಿ ಕೈಲಾಸವ ಮೌನವ ಬಿಟ್ಟು
ಧರೆಗವತರಿಸಿದೆ ಜಗದ್ಗುರೋ ||2||

ಕಾಲಟಿಯೆಂಬ ಗ್ರಾಮವು ನಿನ್ನಯ
ಪಾದದ ಮೊದಲನೆ ಸ್ಪರ್ಶವನು |
ಪಡೆದು ಪವಿತ್ರತೆ ಹೊಂದಿತು ಬೆಳಗಿತು
ವಿಶ್ವಪಾಲಕ ಜಗದ್ಗುರೋ ||3||
ಶಿವಗುರು ಆರ್ಯಾಂಬೆ ಪುಣ್ಯ ದಂಪತಿ
ಮಾಡಿದ ತಪವನು ಮೆಚ್ಚುತಲಿ |
ವೈಶಾಖಶುಕ್ಲ ಪಂಚಮಿ ದಿನದಿ
ಜನ್ಮವನೆತ್ತಿದೆ ಜಗದ್ಗುರೋ ||4||

ಎಲ್ಲಾ ತಿಳಿದವನಾದರು ನೀನು
ಮತ್ತೆ ತಿಳಿಯುವ ನಾಟಕಗೈದೆ |
ಮೊದಲ ವರ್ಷವೇ ಭಾಷೆಗಳೆಲ್ಲವ
ಕಲಿತ ಮಹಿಮ ನೀ ಜಗದ್ಗುರೋ ||5||
ಪಂಚಮವರುಷದಿ ಉಪವೀತವ
ನೀ ಧರಿಸಿದೆ ನಾಲ್ಕೂ ವೇದಗಳ |
ಎಂಟನೆ ವಯಸಲಿ ಕಂಠದಿ ಧರಿಸಿದೆ
ವೇದರಕ್ಷಕ ಜಗದ್ಗುರೋ ||6||

ಭಿಕ್ಷೆಯ ಬೇಡುತ ದೀನಳು ದೈನ್ಯದಿ
ನೀಡಿದ ನೆಲ್ಲಿಯ ಕಾಯಿಯನು |
ಸೇವಿಸಿ ಸ್ವರ್ಣದ ವೃಷ್ಟಿಯಗೈದೆ
ಕುಬೇರಮಿತ್ರನೆ ಜಗದ್ಗುರೋ ||7||
ಜಳಕಕೆ ತೆರಳಿ ಬಿಸಿಲಲಿ ಬಳಲಿ
ಇಳೆಯಲಿ ಉರುಳಿದ ಮಾತೃವಿನ |
ಜಳಕಕೆ ನದಿಯನು ಮನೆಗೇ ತರಿಸಿದ
ಗಂಗಾಧರ ನೀ ಜಗದ್ಗುರೋ ||8||

ಪೂರ್ಣಾನದಿಯಲಿ ಮೊಸಳೆಯು ಪಾದವ
ಪಿಡಿದಿಹ ನೆಪದಲಿ ತಾಯಿಯನು |
ಒಪ್ಪಿಸಿ ಸಂನ್ಯಾಸಕೆ ಅಪ್ಪಣೆ ಪಡೆದೆ
ಸತ್ಯಸ್ವರೂಪನೆ ಜಗದ್ಗುರೋ ||9||
ಇಂದ್ರಾದಿಗಳಿಗೂ ಅಪ್ಪಣೆ ಮಾಡುವ
ಈಶನೆ ನೀನು ಮಾನುಷದಿ |
ಜನನಿಯ ಅಪ್ಪಣೆ ಪಡೆಯುವ ರೂಪದಿ
ಮಾರ್ಗವ ತೋರಿದೆ ಜಗದ್ಗುರೋ ||10||

ಎಲ್ಲವ ತ್ಯಜಿಸಿ ಕ್ರಮಸಂನ್ಯಾಸಕೆ ಗುರುಗಳ
ಹುಡುಕುತ ಧೈರ್ಯದಲಿ |
ನರ್ಮದೆ ತೀರದಿ ಗುಹೆಯಲಿ ಕಂಡೆ
ಗುರು ಗೋವಿಂದರ ಜಗದ್ಗುರೋ ||11||
ಗುರುಗಳ ಪಾದದ ಸೇವೆಯ ಗೈಯುತ
ಕಲಿತಿಹೆ ಎಲ್ಲ ವಿದ್ಯೆಯನು |
ನಿನಗೆ ನೀನೆ ಸಾಟಿಯು ಜಗದೀ
ವಿದ್ಯೆಗಳೊಡೆಯ ಜಗದ್ಗುರೋ ||12||

ನರ್ಮದೆನದಿಯ ರಭಸವ ತಡೆದೆ
ಬಳಸಿಯೆ ನಿನ್ನಯ ಕಮಂಡಲು |
ಸಂಸೃತಿಸಾಗರ ದಾಟಿದ ನಿನಗೆ
ಹೆಚ್ಚಿನದೇನಿದೆ ಜಗದ್ಗುರೋ ||13||
ಗುರುವಾಣತಿಯೊಳು ಕಾಶಿಯ ಸೇರಿದೆ
ಶಿಷ್ಯರ ಸಂಗ್ರಹ ಮಾಡುತಲಿ |
ವಿಶ್ವೇಶ್ವರನ ಅಪ್ಪಣೆ ಪಡೆದು ಭಾಷ್ಯವ
ರಚಿಸಿದೆ ಜಗದ್ಗುರೋ ||14||

ಸೌಂದರ್ಯಲಹರೀ ಮೊದಲಾಗಿರುತಿಹ
ನಾನಾರೂಪದ ಸ್ತೋತ್ರಗಳ |
ರಚಿಸಿದೆ ನೀನು ನಮ್ಮಲಿ ದಯೆಯನು
ತೋರಿಸಲೋಸುಗ ಜಗದ್ಗುರೋ ||15||
ಜೇನೇ ಸಿಹಿಯು ಕಬ್ಬೇ ಸಿಹಿಯು
ಎನ್ನುತ ಯಾವನು ಪೇಳುವನೋ |
ಅವನೆ ನಿನ್ನಯ ಸ್ತೋತ್ರದ ರುಚಿಯ
ಸವಿಯದೆ ಹೋದವ ಜಗದ್ಗುರೋ ||16||

ಭಾಷ್ಯದ ಪಾಠವ ಗೈಯುತಲಿರಲು
ಸನಿಹಕೆ ವ್ಯಾಸರು ಬಂದೊಮ್ಮೆ |
ಕೇಳಲು ಪ್ರಶ್ನೆಗಳನುಪಮದುತ್ತರ
ನೀಡಿದ ಮಹಿಮನೆ ಜಗದ್ಗುರೋ ||17||
ತಮ್ಮ ಮನೋಗತ ಭಾಷ್ಯದಿ ಕಂಡು
ಆಚಂದ್ರಾರ್ಕವು ಭಾಷ್ಯವಿದು |
ಬೆಳಗಲಿ ಎಂದು ಹರಸಿದ ವ್ಯಾಸರ
ಪ್ರೀತಿಯ ಪಾತ್ರನೆ ಜಗದ್ಗುರೋ ||18||

ದುಷ್ಟ ಮತಗಳ ಖಂಡನೆಗೈದ
ಕುಮಾರಿಲಭಟ್ಟಪಾದರಿಗೆ |
ಅಂತಿಮ ಕ್ಷಣದಿ ದರುಶನ ನೀಡಿ
ಪಾವನಗೊಳಿಸಿದ ಜಗದ್ಗುರೋ ||19||
ಮಂಡನರೆಂಬ ಕರ್ಮಠರನ್ನು
ವಾದದಿ ಗೆಲಿದು ಮೋದದಲಿ |
ಶಿಷ್ಯಪರಿಗ್ರಹ ಮಾಡಿ ಅವರಿಗೆ
ಸಂನ್ಯಾಸ ನೀಡಿದ ಜಗದ್ಗುರೋ ||20||

ಪರಮವಿರಾಗಿ ನೀ ಕಾಪಾಲಿಕನ
ಕೋರಿಕೆಯಂತೆ ಶಿರವನು ನೀಡಲು |
ಒಪ್ಪಿದೆಯಾದರೂ ನರಸಿಂಹಕಾವಲ
ಶಿಷ್ಯನೋಳ್ ಪಡೆದೆ ಜಗದ್ಗುರೋ ||21||
ಶೃಂಗಗಿರಿಯಲಿ ಕಪ್ಪೆಗೆ ನೆರಳನು
ನೀಡುತಲಿರುವ ಸರ್ಪವನು |
ವೀಕ್ಷಿಸಿ ಅಲ್ಲೆ ಮೊದಲನೆ ಪೀಠವ
ಸ್ಥಾಪನೆಗೈದೆ ಜಗದ್ಗುರೋ ||22||

ಯಂತ್ರರಾಜದಲಿ ಶಾರದಾ ಮಾತೆಯ
ಸಾನ್ನಿಧ್ಯವನು ನೆಲೆಗೊಳಿಸಿ |
ಆಕೆಯ ಅರ್ಚನೆಗೈದೆ ಮಹಾತ್ಮನೆ
ಶಾರದಾಪೂಜಕ ಜಗದ್ಗುರೋ ||23||
ಮೂವತ್ತೆರೆಡು ವರ್ಷದ ಅವಧಿಯ
ನಿನ್ನಯ ಜೀವನ ಕಾಲದಲಿ |
ಅನೇಕ ವರ್ಷ ಶೃಂಗಗಿರಿಯಲಿ
ಪಾಠವಗೈದೆ ಜಗದ್ಗುರೋ ||24||

ತೋಟಕ ಗುರುವಿಗೆ ಜ್ಞಾನವನೆಲ್ಲವ
ಒಮ್ಮೆಯೇ ನೀಡಿ ಪಾಲಿಸಿದೆ |
ನಿನ್ನಿಂದಾಗದು ಎಂಬುದು ಲೋಕದಿ
ಇಲ್ಲವೇ ಇಲ್ಲ ಜಗದ್ಗುರೋ ||25||
ಕೊಟ್ಟ ಮಾತಿಗೆ ತಪ್ಪದೆ ನೀನು
ತಾಯಿಯ ಅಂತಿಮಕಾಲದಲಿ |
ಬಳಿಯಲಿ ಇದ್ದು ವಿಷ್ಣುಲೋಕವ
ದೊರಕಿಸಿಕೊಟ್ಟಿಹೆ ಜಗದ್ಗುರೋ ||26||

ಶೃಂಗೇರಿ ಬದರಿ ಪುರೀ ದ್ವಾರಕೆ
ನಾಲ್ಕು ಆಮ್ನಾಯ ಪೀಠಗಳ |
ಸ್ಥಾಪನೆಗೈದೆ ನಾಲ್ಕು ದಿಕ್ಕಲಿ
ಚತುರ್ಮಠಸ್ಥಾಪಕ ಜಗದ್ಗುರೋ ||27||
ಸುರೇಶ್ವರ ತೋಟಕ ಹಸ್ತಾಮಲಕ
ಪದ್ಮಪಾದ ಯತಿವರರ |
ನಾಲ್ಕು ಪೀಠಕೆ ಗುರುಗಳಗೈದೆ
ಯತಿಗಳ ಒಡೆಯ ಜಗದ್ಗುರೋ ||28||

ಕೇರಳ ರಾಜನು ನಿನ್ನಯ ಬಳಿಯಲಿ
ತನ್ನಯ ನಾಟಕ ನಾಶವನು |
ಪೇಳಲು ಮತ್ತೆ ಅವನಿಗೆ ಅವುಗಳ
ನುಡಿದು ತಿಳಿಸಿದೆ ಜಗದ್ಗುರೋ ||29||
ಗೌಡಪಾದರಾ ದರ್ಶಿಸಿ ನೀನು
ನಿನ್ನಯ ಭಾಷ್ಯವ ತೋರಿಸುತ |
ಪರಮಗುರುಗಳ ತುಷ್ಟಿಯ ನೋಡಿ
ತೋಷವ ಪಟ್ಟೆ ಜಗದ್ಗುರೋ ||30||

ಕಾಶ್ಮೀರಕೆ ತೆರಳಿ ವಾದಿಶ್ರೇಷ್ಠರ
ನಿನ್ನಯ ವಾದದಿ ಗೆಲ್ಲುತಲಿ |
ಸರ್ವಜ್ಞಪೀಠಕೆ ಶೋಭೆಯ ತಂದೆ
ನಮ್ಮಯ ತಂದೆ ಜಗದ್ಗುರೋ ||31||
ನಿನ್ನಯ ಧಾಮವ ಹೊಂದಲು
ಬಯಸಿ ತಲುಪುತ ನೀ ಕೇದಾರವನು |
ಅಂತರ್ಧಾನವ ಹೊಂದಿದೆ ಶಿವನೇ
ಅದ್ವೈತಸ್ಥಾಪಕ ಜಗದ್ಗುರೋ ||32||

ತಂದೆಯು ನೀನೇ ತಾಯಿಯು ನೀನೇ
ನೀನೇ ನನ್ನಯ ದೈವವು
ನಿನ್ನನು ಬಿಟ್ಟು ಗತಿ ಇನ್ಯಾರೋ
ನೀನೆ ಹೇಳೋ ಜಗದ್ಗುರೋ |
ನಿನ್ನನು ಬಿಟ್ಟು ಬೇರೇ ಗುರುವನು
ಕನಸಲು ನೆನೆಯೆನು ಒಮ್ಮೆಯೂ
ನೀನೇ ನನ್ನಯ ಹೃದಯದಿ ಇರಲು
ಯಾರಿಂದೇನೋ ಜಗದ್ಗುರೋ ||

ನನ್ನಯ ಕಣ್ಣಲಿ ಜನಿಸಿದ ಜಲವೂ
ಎದೆಯಾ ತಲುಪುವ ಮುನ್ನವೇ
ನನ್ನಯ ಶೋಕವ ಹರಿಸೋ ಹರನೆ
ದೀನರ ಬಂಧುವೇ ಜಗದ್ಗುರೋ |
ನಿನ್ನಯ ಮೂರ್ತಿಯ ನೋಡುತ
ಹಾಡುತ ಹೃದಯದಿ ಪ್ರೀತಿಯ ಮಾಡುತಲಿ
ಕಣ್ಣಲಿ ತೋಷದ ಬಾಷ್ಪವ ಸುರಿಸುವ
ನನ್ನನು ಹರಸೋ ಜಗದ್ಗುರೋ ||