ಗುರುದೇವತಾ ಭಜನಮಂಜರೀ

ನಿನ್ನಂತೆ ನಾನಾಗಲಾರೆ

ಘೋಷಃ

ವೀರ ಧೀರ ಶೂರ ಪರಾಕ್ರಮ ಆಂಜನೇಯ ಸ್ವಾಮಿ ಕೀ ಜೈ

ಶ್ಲೋಕಃ

ಆಂಜನೇಯಮತಿಪಾಟಲಾನನಂ
ಕಾಂಚನಾದ್ರಿ ಕಮನೀಯವಿಗ್ರಹಮ್ |
ಪಾರಿಜಾತತರುಮೂಲವಾಸಿನಂ
ಭಾವಯಾಮಿ ಪವಮಾನನಂದನಮ್ ||

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತಮಸ್ತಕಾಂಜಲಿಮ್ |
ಬಾಷ್ಪವಾರಿಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ಕೀರ್ತನಮ್ — 2

ರಾಗಃ : ಸಿಂಧುಭೈರವಿ

ತಾಲಃ : ಆದಿ

ನಿನ್ನಂತೆ ನಾನಾಗಲಾರೆ
ಏನು ಮಾಡಲಿ ಹನುಮ |
ನಿನ್ನಂತಾಗದೆ ನನ್ನವನಾಗನೆ
ನಿನ್ನ ಪ್ರಭು ಶ್ರೀರಾಮ |
ನಿನ್ನ ಪ್ರಭು ಶ್ರೀರಾಮ ||

ಎಟುಕದ ಹಣ್ಣನೆ ನಾ ತರಲಾರೆ
ಮೇಲಕ್ಕೆ ಎಗರಿ ಹನುಮ |
ಸೂರ್ಯನ ಹಿಡಿವ ಸಾಹಸಕ್ಕಿಳಿದರೆ
ಆಕ್ಷಣ ನಾ ನಿರ್ನಾಮ ||

ಹಾದಿಯ ಹಳ್ಳವೆ ದಾಟಲಸಾಧ್ಯ
ಹೀಗಿರುವಾಗ ಹನುಮ |
ಸಾಗರ ದಾಟುವ ಹಂಬಲ ಸಾಧ್ಯವೆ
ಅಯ್ಯೋ ರಾಮ ರಾಮ ||

ಜಗಳವ ಕಂಡರೆ ಓಡುವೆ ದೂರ
ಎದೆಯಲಿ ಡವ ಡವ ಹನುಮ |
ರಕ್ಕಸರ ನಾ ಕನಸಲಿಕಂಡರೂ
ಬದುಕಿಗೆ ಪೂರ್ಣ ವಿರಾಮ ||

ಅಟ್ಟವ ಹತ್ತಲು ಶಕ್ತಿಯು ಇಲ್ಲ
ಇಂಥ ದೇಹವು ಹನುಮ |
ಬೆಟ್ಟವನೆತ್ತುವೆನೆಂದರೆ ಎನ್ನನು
ನಂಬುವನೇ ಶ್ರೀರಾಮ ||

ಕನಸಲು ಮನಸಲು ನಿನ್ನ ಉಸಿರಲು
ತುಂಬಿದೆ ರಾಮನ ನಾಮ |
ಚಂಚಲವಾದ ನನ್ನೀಮನದಲಿ
ನಿಲ್ಲುವರಾರೋ ಹನುಮ ||

ಭಕ್ತಿಯು ಇಲ್ಲ ಶಕ್ತಿಯು
ಇಲ್ಲ ಹುಟ್ಟಿದೆ ಏತಕೋ ಕಾಣೆ |
ನೀ ಕೃಪೆಮಾಡದೆ ಹೋದರೆ
ಹನುಮ ನಿನ್ನ ರಾಮನ ಆಣೆ ||

ನಾಮಾವಲಿಃ

ವೀರ ಮಾರುತಿ ಗಂಭೀರ ಮಾರುತಿ
ಧೀರ ಮಾರುತಿ ಅತಿ ಧೀರ ಮಾರುತಿ
ಗೀತ ಮಾರುತಿ ಸಂಗೀತ ಮಾರುತಿ
ದೂತ ಮಾರುತಿ ರಾಮದೂತ ಮಾರುತಿ
ಭಕ್ತ ಮಾರುತಿ ಪರಮಭಕ್ತ ಮಾರುತಿ
ದಾಸ ಮಾರುತಿ ರಾಮ ದಾಸ ಮಾರುತಿ

ಘೋಷಃ

ವೀರ ಧೀರ ಶೂರ ಪರಾಕ್ರಮ ಆಂಜನೇಯ ಸ್ವಾಮಿ ಕೀ ಜೈ