ಶ್ರೀಗಣೇಶಶಾರದಾಗುರುಭ್ಯೋ ನಮಃ
ಆಸ್ತಿಕ ಬಂಧುಗಳೆ...
ಶ್ರೀಮತ್ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನರಾದ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀವಿಭೂಷಿತ
ಶ್ರೀಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀಶ್ರೀಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಶ್ರೀಶಾಂಕರ ತತ್ತ್ವಪ್ರಸಾರ ಅಭಿಯಾನವು ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿರುವುದು ತಮಗೆಲ್ಲರಿಗೂ ವಿದಿತವೇ ಆಗಿದೆ. ಜಗದ್ಗುರು ಮಹಾಸ್ವಾಮಿಗಳವರಿಂದ ಅನುಗ್ರಹಿಸಲ್ಪಟ್ಟ ‘ಶ್ರೀಶಾರದಾ ಶಂಕರ ಭಕ್ತಮಂಡಳಿ’ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಹಲವಾರು ಕೇಂದ್ರಗಳಲ್ಲಿ ಆಸ್ತಿಕಮಹಾಜನರಿಂದ ಶ್ರೇಯಃಪ್ರದವಾದ ಜಗದ್ಗುರು ಶ್ರೀಶಂಕರ ಭಗವತ್ಪೂಜ್ಯಪಾದರ ಜಯಂತಿ ಮಹೋತ್ಸವ ಮತ್ತು ಅಷ್ಟೋತ್ತರ ಶತನಾಮ ಪಾರಾಯಣ ಯಜ್ಞ, ಗುರುಸಪರ್ಯಾ ಮೊದಲಾದ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿವೆ.ಅಂತಹ ಕಾರ್ಯಕ್ರಮಗಳಲ್ಲಿ ಈ ಭಗವದ್ಭಜನಾ ಕಾರ್ಯಕ್ರಮವು ಅತ್ಯಂತ ಮಹತ್ತ್ವವುಳ್ಳದ್ದಾಗಿದೆ. ಭಜನೆಯೆಂಬುದು ಭಗವಂತನನ್ನು ಭಕ್ತಿಯಿಂದ ಸ್ಮರಿಸುತ್ತಾ ಭಗವಂತನಲ್ಲಿ ಮನಸ್ಸನ್ನು ಲೀನಮಾಡಿ ಅಲೌಕಿಕವಾದ ಆನಂದಾನುಭವವನ್ನು ಮತ್ತು ಅನಂತವಾದ ಪುಣ್ಯವನ್ನು ಹೊಂದುವ ಒಂದು ಕಾರ್ಯಕ್ರಮ.
ಶ್ರೀಶಾರದಾ ಶಂಕರ ಭಕ್ತಮಂಡಳಿಯ ಭಜನಾ ಪದ್ಧತಿಯನ್ನು ವಿವರಿಸುವ ‘ಗುರುದೇವತಾ ಭಜನಮಂಜರೀ’ಯ ಮೊದಲನೆಯ ಸಂಪುಟವು ಜಗದ್ಗುರು ಮಹಾಸ್ವಾಮಿಗಳ ಆದೇಶ ಮತ್ತು ಪರಿಪೂರ್ಣ ಅನುಗ್ರಹದೊಂದಿಗೆ ಈಗ ಹೊರತರಲಾಗುತ್ತಿದೆ. ಇದು ಇನ್ನು ಮುಂದೆಯೂ ಅನೇಕ ಕೀರ್ತನೆಗಳೊಂದಿಗೆ ಅನೇಕ ಸಂಪುಟಗಳಾಗಿಯೂ ಬೆಳೆಯಲಿದೆ. ಭಜನೆಯನ್ನು ಪ್ರಾರ್ಥನಾ ಶ್ಲೋಕಗಳಿಂದ ಪ್ರಾರಂಭಮಾಡಿ, ದೇವತಾ ಗುರು ಕೀರ್ತನೆಗಳು, ಅರ್ಚನೆ ಹಾಗೂ ನೈವೇದ್ಯ, ಆರತಿ, ತತ್ತ್ವಪದ ಮತ್ತು ಮಂಗಳಶ್ಲೋಕಗಳೊಂದಿಗೆ ಮುಕ್ತಾಯಮಾಡುವ ಕ್ರಮವು ಈ ಗ್ರಂಥದಲ್ಲಿ ಸೂಚಿಸಲ್ಪಟ್ಟಿದೆ. ಇದೇ ಕ್ರಮದಲ್ಲಿ ಗುರುವಾರ ಮತ್ತು ಶನಿವಾರ/ಭಾನುವಾರ ಭಜನೆಯನ್ನು ಮಾಡುವುದು. ಎಲ್ಲರೂ ಈ ಅಂತರ್ಜಾಲದಲ್ಲಿರುವ ರಾಗ ತಾಳವನ್ನೇ ಅನುಸರಿಸುವುದರ ಮೂಲಕ ಸಾಮೂಹಿಕ ಸಮರ್ಪಣಾ ಕಾರ್ಯಕ್ರಮಗಳಲ್ಲಿ ಏಕಕಂಠದಿಂದ ಹಾಡಬಹುದು.
ಪ್ರತಿಯೊಬ್ಬ ಆಸ್ತಿಕರು ಈ ಭಜನಾ ಕಾರ್ಯಕ್ರಮಗಳಲ್ಲಿ ಜಾತಿ, ಲಿಂಗ ವಯಸ್ಸು ಭೇದವಿಲ್ಲದೆ ಪಾಲ್ಗೊಂಡು ಶಾರದಾ ಚಂದ್ರಮೌಳೀಶ್ವರರ ಹಾಗೂ ಜಗದ್ಗುರು ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ಪ್ರಾರ್ಥಿಸುತ್ತಿದ್ದೇನೆ.
ಗುರುಸೇವಾಧುರೀಣ
ಪದ್ಮಶ್ರೀ ಪುರಸ್ಕೃತ
ಡಾ. ವಿ. ಆರ್. ಗೌರೀಶಂಕರ್
ಆಡಳಿತಾಧಿಕಾರಿಗಳು ಶ್ರೀಶಾರದಾಪೀಠ, ಶೃಂಗೇರಿ